ಮಟ್ಟ ಬದಲಾವಣೆಯ ಕಟ್ಟೆ -
	ನಾಲೆಯ ಇಲ್ಲವೆ ಮತ್ತಾವುದೇ ಜಲಮಾರ್ಗದ ಎರಡು ವಿಭಾಗಗಳಲ್ಲಿಯ ನೀರಿನ ಮಟ್ಟವನ್ನು ಏರಿಸಲೊ ತಗ್ಗಿಸಲೊ ಸಾಧ್ಯವಾಗುವ, ಆ ವಿಭಾಗಗಳು ಒಂದರೊಡನೊಂದು ಸಂಪರ್ಕಿಸುವಂತೆ ಎರಡು ಕಡೆಗಳಲ್ಲಿ ಬಾಗಿಲುಗಳಿರುವ ಗೂಡು ಇಲ್ಲವೇ ಆವರಣ (ಲಾಕ್). ಹಡಗು ಇಲ್ಲವೆ ದೋಣಿಗಳ ಸಂಚಾರಕ್ಕೆ ಕಾಲುವೆ/ನಾಲೆ ಒಂದೇ ಮಟ್ಟದಲ್ಲಿರದೆ ಬೇರೆಬೇರೆ ಮಟ್ಟಗಳಲ್ಲಿರುವ ಸಂದರ್ಭದಲ್ಲಿ, ಮಟ್ಟ ಬದಲಾಯಿಸುವ ಸ್ಥಳಗಳಲ್ಲಿ ಕಾಲುವೆಯ/ನಾಲೆಯ ಒಂದು ಪ್ರದೇಶವನ್ನು ಯುಕ್ತ ಹೆಬ್ಬಾಗಿಲುಗಳಿಂದ ಒಂದು ಕಟ್ಟೆಯಂತೆ ಏರ್ಪಡಿಸಿ, ಹಡಗು/ದೋಣಿ ಕೆಳಮಟ್ಟದಲ್ಲಿದ್ದು ಮೇಲ್ಮಟ್ಟಕ್ಕೆ ಏರಬೇಕಾದ ಸಂದರ್ಭದಲ್ಲಿ ಕಟ್ಟೆಯ ನೀರಿನ ಮಟ್ಟವನ್ನು ತೂಬಿನ ಮೂಲಕ ಯುಕ್ತ ರೀತಿಯಲ್ಲಿ ತಗ್ಗಿಸಿ, ಹಡಗು/ದೋಣಿಯನ್ನು ಕಟ್ಟೆಯೊಳಕ್ಕೆ ಸಾಗಿಸಿ, ಹೆಬ್ಬಾಗಿಲು ಮುಚ್ಚಿ, ಕಟ್ಟೆಯೊಳಕ್ಕೆ ಹೊರಗಿನಿಂದ ನೀರು ಬಿಟ್ಟುಕೊಂಡು ನೀರಿನ ಮಟ್ಟವನ್ನು ತೂಬಿನ ಮೂಲಕ ಯುಕ್ತವಾಗಿ ಎತ್ತಿರಿಸಿ, ಹಡಗು/ದೋಣಿ ಮುಂದೆ ಸಾಗಲು ಇಂಥ ಏರ್ಪಾಡು ಅನುಕೂಲಮಾಡಿಕೊಡುತ್ತದೆ. ಕಾಲುವೆಯ/ನಾಲೆಯ ಇಳುಕಲಿಗಿಂತ ಅದು ಹರಿಯುವ ನೆಲ ಕಡಿದಾಗಿರುವೆಡೆಯ ಮಟ್ಟ ವ್ಯತ್ಯಾಸವನ್ನು ಕಾಲುವೆ/ನಾಲೆಯ ತಳದಲ್ಲಿ ಮೆಟ್ಟಲು ಕಟ್ಟಿ ಸರಿದೂಗಿಸಬೇಕಾಗುತ್ತದೆ. ಆಗ ನಾಲೆ ಎರಡು ಮಟ್ಟಗಳಲ್ಲಿ ಹರಿಯುತ್ತದೆ. ಕೇವಲ ನೀರಾವರಿಗಾಗಿಯೇ ಇರುವ ನಾಲೆಗಳಲ್ಲಿ ಪಾತಗಳನ್ನು (ಡ್ರಾಪ್ಸ್) ಬೇಕಾದ ಸ್ಥಳದಲ್ಲಿ ಅಧಿಕ ವೆಚ್ಚವಿಲ್ಲದೆ ನಿರ್ಮಿಸಿ ನಾಲೆಯ ಮಟ್ಟವನ್ನು ಇಳಿಸುತ್ತಾರೆ. ಆದರೆ ಕೇವಲ ಜಲಸಂಚಾರಕ್ಕಾಗಿ ಇರುವ ನಾಲೆಗಳಲ್ಲಿಯೂ ನೀರಾವರಿ ನಾಲೆಗಳಲ್ಲಿ ಜಲಸಂಚಾರವಿರುವ ಕಡೆಗಳಲ್ಲಿಯೂ ಮಟ್ಟದ ಬದಲಾವಣೆಯ ಕಟ್ಟೆಗಳನ್ನು ಕಟ್ಟಬೇಕಾಗುತ್ತದೆ.

	ಜಲಸಂಚಾರಕ್ಕಾಗಿ ಮಾತ್ರವೇ ಉಪಯೋಗವಾಗುವ ನಾಲೆಗಳಲ್ಲಿ ಮೇಲುಮಟ್ಟದ ನಾಲೆಯನ್ನು ಕೆಳಮಟ್ಟದ ನಾಲೆಯೊಂದಿಗೆ ಮಟ್ಟ ಬದಲಾವಣೆಯ ಕಟ್ಟೆಗಳಿಂದ ಕೂಡಿಸುತ್ತಾರೆ. ನೀರು ಬೀಳುವ ಜಾಗದಿಂದ ಕೊಂಚದೂರ ಒಂದು ಗೂಡಿನಿಂದ (ಛೇಂಬರ್) ನಾಲೆಯನ್ನು ಪ್ರತ್ಯೇಕಿಸುತ್ತಾರೆ. ಗೂಡಿನ ಎರಡು ಕೊನೆಗಳಲ್ಲಿಯೂ ನೀರನ್ನು ಬಿಡದಂಥ ಭದ್ರ ಕವಾಟಗಳಿರುತ್ತವೆ. ಇವನ್ನು ತೆರೆದು ಎರಡು ಕೊನೆಗಳಿಂದಲೂ ಹಡಗು ಮತ್ತು ದೋಣಿಗಳನ್ನು ಒಳಬಿಡಬಹುದು ಇಲ್ಲವೆ ಹೊರಕ್ಕೆ ಕಳುಹಿಸಬಹುದು. ಗೂಡಿನ ಒಂದು ಕೊನೆ ನಾಲೆಯ ಮೇಲಿನ ಮಟ್ಟದ ಕಡೆಗೂ ಇನ್ನೊಂದು ಕೊನೆ ಕೆಳಮಟ್ಟದ ಕಡೆಗೂ ತೆರೆದುಕೊಳ್ಳುವಂತಿರುತ್ತವೆ. ಗೂಡಿನ ತಳವನ್ನೂ ಪಕ್ಕದ ಗೋಡೆಗಳನ್ನೂ ಇಟ್ಟಿಗೆ ಇಲ್ಲವೇ ಕಾಂಕ್ರೀಟಿನಿಂದ ಕಟ್ಟಬಹುದು. ಗೂಡಿನ ಬಾಗಿಲುಗಳಲ್ಲಾಗಲಿ ಅವುಗಳ ಹಿಂದೆ ಇರುವ ಪಕ್ಕದ ಗೋಡೆಗಳಲ್ಲಾಗಲಿ ಇರುವ ತೂಬುಗಳ ಮೂಲಕ ಗೂಡಿನೊಳಕ್ಕೆ ಅದರ ನೀರಿನ ಮಟ್ಟ ನಾಲೆಯ ಮೇಲಿನ ಭಾಗದ ಮಟ್ಟದವರೆಗೆ ಬರುವತನಕವೂ ತುಂಬುತ್ತಾರೆ. ಈ ಸ್ಥಿತಿ ಏರ್ಪಟ್ಟಾಗ ಮೇಲುಗಡೆಯ ಬಾಗಿಲನ್ನು ತೆರೆದು ಹಡಗನ್ನು ಗೂಡಿನೊಳಕ್ಕೆ ಬಿಡುತ್ತಾರೆ. ಅನಂತರ ಮೇಲುಗಡೆಯ ಬಾಗಿಲನ್ನೂ ಕೆಳಗಿನ ಬಾಗಿಲನ್ನೂ ಮುಚ್ಚಿ ಗೂಡಿನ ನೀರಿನ ಮಟ್ಟ ಕೆಳನಾಲೆಯ ಮಟ್ಟಕ್ಕೆ ಇಳಿಯುವ ತನಕವೂ ತೆರೆದಿರುತ್ತಾರೆ. ನೀರಿನ ಮಟ್ಟದೊಂದಿಗೆ ಅದರ ಮೇಲೆ ಇರುವ ಹಡಗೂ ಕೆಳಮಟ್ಟಕ್ಕೆ ಇಳಿಯುತ್ತದೆ. ಕೆಳಗಿನ ಬಾಗಿಲನ್ನು ತೆರೆದರೆ ಹಡಗು ಕೆಳಮಟ್ಟದಲ್ಲಿ ಹೊರಕ್ಕೆ ಹೋಗಲು ಸಾಧ್ಯವಾಗುತ್ತದೆ. ಹಡಗು ಕೆಳಗಿನಿಂದ ಮೇಲಕ್ಕೆ ಏರುವಾಗ ಈ ವಿಧಾನದ ವಿಲೋಮಕ್ರಿಯೆ ನಡೆದಿರುತ್ತದೆ. ಗೂಡಿನ ನೀರನ್ನು ಖಾಲಿ ಮಾಡಿದೆ ಎಂದರೆ ಅದರಲ್ಲಿ ನೀರೇ ಇರುವುದಿಲ್ಲ ಎಂದು ಅರ್ಥವಲ್ಲ. ಅದರಲ್ಲಿ ನೀರಿನ ಮಟ್ಟ ಕೆಳನಾಲೆಯ ಮಟ್ಟದಲ್ಲಿರುತ್ತದೆ ಅಷ್ಟೆ.

	ಗೂಡಿನೊಳಕ್ಕೆ ನೀರನ್ನು ಬಿಡುವ ತೂಬುಗಳು ಸುಮಾರು ಮೂರು ನಿಮಿಷಗಳಲ್ಲಿ ಅದನ್ನು ತುಂಬುವಂತೆಯೂ ಖಾಲಿಮಾಡುವಂತೆಯೂ ಇರುತ್ತವೆ. ತೂಬಿನ ಬಾಗಿಲುಗಳನ್ನು ಮುಚ್ಚಲು ಮತ್ತು ತೆರೆಯಲು ವಿಶಿಷ್ಟ ಹಲ್ಲುಚಕ್ರಗಳ (ರಾಕ್ ಅಂಡ್ ಪಿನಿಯನ್) ಏರ್ಪಾಡು ಇದೆ. ಗೂಡಿನ ಹೊರ ಬಾಗಿಲುಗಳನ್ನು ಎರಡು ಹಾಳೆಗಳಾಗಿ ಮಾಡಿ ಗುದ್ದುಗಂಬದ (ಅಬಟ್‍ಮೆಂಟ್) ಪಕ್ಕದಲ್ಲಿ ಅದರ ಲಂಬಾಕ್ಷದ ಮೇಲೆ ತಿರುಗುವಂತೆ ಮಾಡಿರುತ್ತಾರೆ. ಎರಡು ಹೋಳುಗಳ ಒಟ್ಟು ಅಗಲ ಗೂಡಿನ ಅಗಲಕ್ಕಿಂತಲೂ ಕೊಂಚ ಹೆಚ್ಚಾಗಿದ್ದು ಕೊನೆಗಳು ಹೊರಗಡೆ ಉಬ್ಬಿರುತ್ತವೆ. ಸಣ್ಣ ಬಾಗಿಲುಗಳನ್ನು ಮರದಿಂದಲೂ ದೊಡ್ಡವನ್ನು ಉಕ್ಕಿನಿಂದಲೂ ನಿರ್ಮಿಸಿರುತ್ತಾರೆ.

	ಭಾರತದ ಕೃಷ್ಣ ಮತ್ತು ಗೋದಾವರೀ ನದೀಮುಖಜಭೂಮಿಗಳಲ್ಲಿ ಒಂದೇ ನಾಲೆಯನ್ನು ನೀರಾವರಿಗೂ ಜಲಯಾನಕ್ಕೂ ಉಪಯೋಗಿಸುವುದಿದೆ. ನೀರಾವರಿಗೆ ನೀರನ್ನು ಬಿಡಲು ನಾಲೆಗೆ ಅಡ್ಡವಾಗಿ ನಿಯಂತ್ರಕವೂ ಪಾತವೂ (ರೆಗ್ಯುಲೇಟರ್ ಅಂಡ್ ಡ್ರಾಪ್) ಬೇಕಾಗುತ್ತವೆ. ಕೇವಲ ನೀರಾವರಿಗೇ ಉಪಯೋಗಿಸುವ ನಾಲೆಯಲ್ಲಿ ಪಾತ ನಾಲೆಯ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಹರಡಿರುತ್ತದೆ. ಮೇಲಿಂದ ಬರುವ ನೀರೂ ಕೆಳಕ್ಕೆ ಇಳಿಯುವ ನೀರೂ ನಾಲೆಯ ಅಕ್ಷಕ್ಕೆ ನೇರವಾಗಿರುತ್ತವೆ. ಆದರೆ ಜಲಯಾನದ ನಾಲೆಯಲ್ಲಿ ಮಟ್ಟ ಬದಲಾವಣೆಯಾದಾಗ ದೋಣಿಗಳು ಹೋಗುವ ಮಾರ್ಗವನ್ನು ನೀರಾವರಿಯ ನಾಲೆಯ ಮಾರ್ಗದಿಂದ ಪ್ರತ್ಯೇಕಿಸಬೇಕಾಗುತ್ತದೆ. ತತ್ಸಬಂಧ ಕಾಮಗಾರಿಗಳ ಏರ್ಪಾಟು ಎಂದರೆ (1) ನೇರನಾಲೆಯ ರೇಖೆಯ ಮೇಲೆ ಅಣೆಕಟ್ಟನ್ನು ಕಟ್ಟಿ ದೋಣಿಯ ಗೂಡನ್ನು ಬೇರೆ ಮಾರ್ಗದಲ್ಲಿ ಕಟ್ಟುವುದು; (2) ದೋಣಿಯ ಗೂಡನ್ನೇ ನೇರನಾಲೆಯ ಮೇಲೆ ಕಟ್ಟಿ ನೀರಾವರಿಯ ಅಣೆಕಟ್ಟನ್ನು ಸಮಾಂತರವಾದ ಬೇರೆ ಮಾರ್ಗದಲ್ಲಿಡುವುದು; (3) ಎರಡೂ ಪಕ್ಕ ಪಕ್ಕದಲ್ಲಿರಬಹುದು; ಆಗ ಅಣೆಕಟ್ಟಿಗೆ ನೀರು ಹೋಗುವ ದಾರಿಯನ್ನು ಗೂಡಿನ ದಾರಿಯಿಂದ ದಸಿಗಳನ್ನು (ಫೀಡರ್‍ಫೈಟ್) ಹೂಳಿ ಪ್ರತ್ಯೇಕಿಸಬೇಕಾಗುತ್ತದೆ.

	ಈ ಅಣೆಕಟ್ಟುಗಳು ಮೇಲುಗಡೆ ಜಲಯಾನಕ್ಕೆ ಬೇಕಾದ ನೀರಿನ ಮಟ್ಟವನ್ನು ನಿಯಂತ್ರಿಸಿ ನೀರಾವರಿಗೆ ಬೇಕಾದ ನೀರನ್ನು ಕೆಳಕ್ಕೆ ಬಿಡುತ್ತವೆ.

	ಸಮುದ್ರದ ಅಲೆಗಳು ನುಗ್ಗಬಹುದಾದ ಸಂದರ್ಭಗಳಲ್ಲಿ ಕಾಲುವೆಯ ಕಡೆಯ ತೆರೆಬಾಗಿಲುಗಳನ್ನು ಎರಡು ಜೊತೆಗಳಾಗಿ ಮಾಡಿ ಅವು ಎದುರು ಬದುರಾಗಿ ತೆರೆದುಕೊಳ್ಳುವಂತೆ ಮಾಡಿರುತ್ತಾರೆ. ಅಂಥ ಸಂದರ್ಭದಲ್ಲಿ ಮುಂದಿನ ಗೋಡೆಗಳನ್ನೂ ಏರಿಗಳನ್ನೂ ಮಹಾಪ್ರವಾಹದ ಮಟ್ಟಕ್ಕಿಂತಲೂ ಎತ್ತರವಾಗಿ ಇಡಬೇಕಾಗುತ್ತದೆ. ಉಪ್ಪುನೀರಿಗೆ ಮೈಯೊಡ್ಡುವ ಬಾಗಿಲುಗಳಿಗೆ ಉಬ್ಬರದ ಮಟ್ಟದ ಮೇಲೆ ಸುಮಾರು 1/3 ಮೀಟರಿನಷ್ಟು ಎತ್ತರದಲ್ಲಿ ತಾಮ್ರದ ತಗಡುಗಳನ್ನು ಹೊದೆಸಿರುತ್ತಾರೆ.

	ಕಟ್ಟೆಗಳ (ಲಾಕ್ಸ್) ಅಳತೆಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಈ ವೈವಿಧ್ಯವನ್ನು ಸೂಚಿಸುವುದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು: ಕಿಯಲ್‍ನಾಲೆ, ಮ್ಯಾಂಚೆಸ್ಟರ್ ನಾಲೆ, ಸೂಯೆಜ್ó ನಾಲೆ, ಪನಾಮಾ ನಾಲೆ ಇವೆಲ್ಲ ದೊಡ್ಡ ಹಡಗುಗಳ ಸಂಚಾರಕ್ಕೆ ಯೋಗ್ಯವಾದವು.

	ನಾಲೆಯ ಮಟ್ಟ ಬದಲಾದ ಕಡೆಗಳಲ್ಲೆಲ್ಲ ಕಟ್ಟೆಗಳನ್ನು ಇಡುವುದಕ್ಕೆ ಬದಲಾಗಿ ಇತ್ತೀಚೆಗೆ ಹಲವು ಕಟ್ಟೆಗಳನ್ನು ಒಂದೇ ಕಡೆ ಜೋಡಿಸಿ ನಡುವೆ ಉದ್ದನೆಯ ಮಟ್ಟವಾದ ಕಾಲುವೆಯನ್ನು ನಿರ್ಮಿಸಿ ಮತ್ತೆ ಕಟ್ಟೆಗಳನ್ನು ಹಾಗೆಯೇ ಗುಂಪಾಗಿ ಇರಿಸುವುದು ರೂಢಿಗೆ ಬಂದಿದೆ. ಕೆಲವೆಡೆ ಒಂದು ಕಟ್ಟೆಗೂ ಇನ್ನೊಂದಕ್ಕೂ ಅಂತರ ಬಿಡದೆ ಮಹಡಿಯ ಮೆಟ್ಟಿಲುಗಳ ಹಾಗೆ ಒಂದೇಕಡೆ ಜೋಡಿಸುವುದು ಉಂಟು. ಇಂಥ ಸಂದರ್ಭದಲ್ಲಿ ಮೇಲು ಮುಖವಾಗಿ ಹೋಗುವ ಹಡಗುಗಳಿಗೋಸ್ಕರ ಕಟ್ಟೆಗಳ ಒಂದು ಮೆಟ್ಟಲು ಸಾಲನ್ನೂ ಕೆಳಮುಖವಾಗಿ ಹೋಗುವ ಹಡಗುಗಳಿಗಾಗಿ ಇನ್ನೊಂದು ಸಾಲನ್ನೂ ಪಕ್ಕದಲ್ಲಿಯೇ ಕಟ್ಟುತ್ತಾರೆ. ಮಹಡಿಯ ಮೆಟ್ಟಲುಗಳಿಗೆ ಬದಲಾಗಿ ವಿದ್ಯುತ್ ಸಾಮಥ್ರ್ಯದಿಂದ ಹಡಗುಗಳನ್ನು ಒಂದು ಮಟ್ಟದಿಂದ ಇನ್ನೊಂದಕ್ಕೆ ಎತ್ತುಗೆಯಂತ್ರಗಳಂತೆ (ಲಿಫ್ಟ್) ಎತ್ತಬಹುದು. ಆದರೂ ಹೆಚ್ಚಾಗಿ ಬಳಕೆಯಲ್ಲಿರುವುದು ಮಟ್ಟಬದಲಾವಣೆಯ ಕಟ್ಟೆಗಳೇ. 					         
 (ಎಚ್.ಸಿ.ಕೆ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್